ಬಸವಲಿಂಗಕವಿ
1679. ವೀರಶೈವ ಕವಿ. ಕೊಟ್ಟೂರು ಬಸವೇಶ್ವರ ಚಾರಿತ್ರ ಎಂಬ ಗ್ರಂಥದ ಕರ್ತೃ. ಇತ್ತೀಚೆಗೆ ಕರ್ಜಗಿ ವಿರಕ್ತಮಠದ ರುದ್ರಸ್ವಾಮಿಗಳು ಇದನ್ನು ಸಂಪಾದಿಸಿ ಪ್ರಕಟಿಸಿದ್ದಾರೆ. ಕವಿ ಕರಣಿಕ ಲಲಾಮ ಭೀಮರಸನ ವಂಶದವ. ಅಜ್ಜ ಬಸವಣ್ಣ ದಂಡನಾಥ, ತಂದೆ ಗುರುನಾಮಧೇಯ, ದೊಡ್ಡಪ್ಪ ಕವಿಕಲ್ಲಮಾಂಕ. ಗುರು ಕಕುದ್ಗಿರಿಯ (ಶಿವಗಂಗೆ) ಮೇಲಣಗವಿಯ ಶಾಂತೇಶ್ವರ ಅಥವಾ ಮಲೆಯ ಶಾಂತೇಶ್ವರ. ಈತನ ಹಿರಿಯರು ಯಾವ ದೊರೆಯಲ್ಲಿ ಕರಣಿಕರಾಗಿದ್ದರು, ದಂಡನಾಯಕರಾಗಿದ್ದರು ಎಂಬುದು ತಿಳಿದುಬರುವುದಿಲ್ಲವಾದರು ಮನೆತನ ತುಂಬ ಗೌರವಯುತವಾಗಿದ್ದು ಎಂಬುದಂತೂ ಸತ್ಯ. ಗುರುಶಾಂತೇಶ್ವರ ಮತ್ತು ಷಡಕ್ಷರದೇವನ ಅನುಗ್ರಹದಿಂದ ತನ್ನ ಗ್ರಂಥವನ್ನು ಬರೆದಂತೆ ಕವಿ ಹೇಳುವುದರಿಂದ ಈತ ಷಡಕ್ಷರಿ ಕವಿಯ ಸಮಕಾಲೀನ ಎಂದು ತಿಳಿದುಬರುತ್ತದೆ.

	ಕೊಟ್ಟೂರು ಬಸವೇಶ್ವರ ಚಾರಿತ್ರ ವಾರ್ಧಕ ಷಟ್ಪದಿಯಲ್ಲಿದೆ. ಇದನ್ನು 1679ರಲ್ಲಿ ಬರೆದಂತೆ ಕವಿ ಹೇಳಿಕೊಂಡಿದ್ದಾನೆ. ಇದರಲ್ಲಿ 19 ಸಂಧಿ, 1,288 ಪದ್ಯಗಳಿವೆ. ವೀರಶೈವ ಪುರಾಣಗಳ ಚೌಕಟ್ಟಿನಲ್ಲಿಯೆ ಸಾಂಪ್ರದಾಯಿಕವಾಗಿ ಈ ಕಾವ್ಯ ನಿರೂಪಣೆಗೊಂಡಿದೆ. ಬಾಣ, ಕಾಳಿದಾಸ, ಸೋಮ, ಭೀಮ, ಹರಿಹರ, ಪಂಡಿತಾರಾಧ್ಯ, ಸಿದ್ಧನಂಜೇಶ, ಷಡಕ್ಷರದೇವ, ತೋಂಟದಸಿದ್ಧ ಮೊದಲಾದವರನ್ನು ಕಾವ್ಯಾರಂಭದಲ್ಲಿ ಸ್ತುತಿಸಿದ್ದಾನೆ. ಪ್ರತಿಯೊಂದು ಸಂಧಿಯ ಆರಂಭದಲ್ಲಿ ಸೂಚನಾಪದ್ಯವಿದ್ದು, ಕೊನೆಗೆ ಒಂದು ವೃತ್ತ ಬರುತ್ತದೆ. ಆಮೇಲೆ ಒಂದು ಷಟ್ಪದಿ ಪದ್ಯ ಬಂದು ಸಂಧಿ ಕೊನೆಗೊಳ್ಳುತ್ತದೆ.

	ಭೂಲೋಕದಲ್ಲಿ ಶಿವಭಕ್ತರು ಪರದೇಶಿಗಳಾಗಿರುವುದನ್ನು ನಾರದ ಶಿವನಿಗೆ ಬಿನ್ನವಿಸಿದಾಗ, ಶಿವ ಬಸವನನ್ನು ಕರೆದು ದೇಶಿಕರೂಪದಲ್ಲಿ ಭೂಮಿಗವತರಿಸಿ ಶಿವಭಕ್ತರನ್ನುದ್ಧರಿಸಿ ಬರುವಂತೆ ಆಜ್ಞಾಪಿಸುತ್ತಾನೆ. ಆ ಬಸವನೆ ಕೊಟ್ಟೂರೇಶನಾಗಿ ಇಳೆಗವತರಿಸುತ್ತಾನೆ. ಆತನ ಹಲವಾರು ಪವಾಡಗಳ ವರ್ಣನೆಯ ಜೊತೆಗೆ ಸಂದರ್ಭಾನುಸಾರ ಅನೇಕ ಪೌರಾಣಿಕ ವ್ಯಕ್ತಿಗಳ ಪುರಾತನರ ಪ್ರಮಥರ ಮತ್ತು ವೀರಶೈವಶರಣರ ಕಥೆಗಳು ಕಾವ್ಯದುದ್ದಕ್ಕೂ ಬಂದಿವೆ. ವೀರಶೈವ ತತ್ತ್ವೋಪದೇಶವೂ ಅಲ್ಲಲ್ಲಿ ಎಡೆಪಡೆದಿದೆ. ಶಿವಾಧಿಕ್ಯಾದಿಗಳನ್ನು ಪ್ರಸ್ತಾಪಿಸುವ ಸಂದರ್ಭದಲ್ಲಿ ಅಥರ್ವಣವೇದ, ಬ್ರಹ್ಮೋತ್ತರಖಂಡ, ಶಿವಪುರಾಣ, ಬ್ರಹ್ಮಾಂಡಪುರಾಣ, ಲಿಂಗಪುರಾಣ, ವಾತುಲ, ಭಾಗವತ ಇತ್ಯಾದಿ ವೇದಾಗಮಪುರಾಣೇತಿಹಾಸಗಳಿಂದ ಬಹುಶ್ರುತನಾದ ಕವಿ ಶ್ಲೋಕಗಳನ್ನು ಉದ್ಧರಿಸಿದ್ದಾನೆ. ಇಲ್ಲಿ ಷಟ್ಪದಿಬಂಧ ಗಂಭೀರಗತಿಯಲ್ಲಿ ಹರಿಯುತ್ತದೆ. ಶೈಲಿ ಪ್ರೌಢವಾಗಿದೆ. ಹೃದಯವನ್ನು ಕಲಕಬಲ್ಲ ಭಾವಾವೇಶಭರಿತ ರಸೋತ್ಕಟ ಸನ್ನಿವೇಶಗಳು ಕಡಿಮೆ. ಆದರೆ ಸುಂದರವೆನ್ನಬಹುದಾದ ಕೆಲವು ವರ್ಣನೆಗಳು ಅಲ್ಲಲ್ಲಿ ಬಂದಿವೆ.
(ಬಿ.ವಿ.ಎಮ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ